Featured
ಸರಳ ಜೀವನ-ಸುಂದರ ಜೀವನ
![](https://risingkannada.com/wp-content/uploads/2020/08/GOD-CREATION-1.jpg)
ಬರಹ: ಡಾ.ಬಸವರಾಜ್ ಗುರೂಜಿ,ವೈದಿಕ ಜ್ಯೋತಿಷಿ ಮತ್ತು ವಾಸ್ತು ತಜ್ಞರು
ಮಗುವಿನಲ್ಲಿರುವಂತಹ ಶ್ರದ್ಧೆ ಶಕ್ತಿಯಿಂದ ಭಗವಂತನನ್ನು ನೋಡಬಹುದು. ಒಬ್ಬ ವ್ಯಕ್ತಿಯು ಸಾಧುವೊಬ್ಬನನ್ನು ಕಂಡು, “ನನಗೇನಾದರೂ ಬೋಧನೆ ಮಾಡಿ” ಎಂದು ಕೇಳಿದ. ಅದಕ್ಕೆ ಸಾಧು “ದೇವರನ್ನು ಹೃತ್ಪೂರ್ವಕ ಪ್ರೀತಿಸು” ಎಂದ. ಪ್ರಶ್ನಿಸಿದವನು, “ನಾನು ದೇವರನ್ನು ಎಂದೂ ಕಂಡಿಲ್ಲ. ಅವನ ವಿಷಯವಾಗಿ ನನಗೇನೂ ಗೊತ್ತಿಲ್ಲ. ಹಾಗಿರುವಾಗ ನಾನು ಅವನನ್ನು ಹೇಗೆ ಪ್ರೀತಿಸಲಿ” ಎಂದು ಕೇಳಿದ. ಆಗ ಸಾಧು “ನೀನು ಹೃತ್ಪೂರ್ವಕ ಯಾರನ್ನು ಪ್ರೀತಿಸುತ್ತೀಯ?” ಎಂದು ಕೇಳಿದ. ಅದಕ್ಕೆ ಆ ವ್ಯಕ್ತಿ “ನನ್ನವರೆಂದು ಯಾರೂ ಇಲ್ಲ. ನನ್ನದೊಂದು ಕುರಿ ಇದೆ. ನಾನು ಅದನ್ನೇ ನನ್ನ ಪ್ರಾಣದಂತೆ ಪ್ರೀತಿಸುತ್ತೇನೆ” ಎಂದ. ಆಗ ಸಾಧು, “ಹಾಗಾದರೆ ಆ ಕುರಿಯನ್ನು ನಿನ್ನ ಮನಸ್ಸನ್ನೆಲ್ಲ ಇಟ್ಟು ಪ್ರೀತಿಸು, ಯಾವಾಗಲೂ ಆ ಕುರಿಯಲ್ಲಿ ದೇವರು ಇರುವನು ಎಂಬುದನ್ನು ನಂಬು” ಎಂದು ಹೇಳಿದ.
ಆತ ಕುರಿಯನ್ನು ಬಹಳ ಪ್ರೀತಿಯಿಂದ ನೋಡಿಕೂಳ್ಳಲಾರಂಭಿಸಿದ. ದೇವರು ಆ ಕುರಿಯಲ್ಲಿ ಇರುವನು ಎಂದು ಅಕ್ಷರಶಃ ನಂಬಿದ. ಕೆಲವು ಕಾಲದ ನಂತರ ಅದೇ ಮಾರ್ಗವಾಗಿ ಹಿಂತಿರುಗುತ್ತಿದ್ಧಾಗ ಸಾಧು ಆ ಶಿಷ್ಯನನ್ನು ಕಂಡು, ಅವನ ಸಾಧನೆಯ ಬಗ್ಗೆ ವಿಚಾರಿಸಿದ. ಅವನು ಗುರುಗಳಿಗೆ ನಮಸ್ಕಾರ ಮಾಡಿ, “ಗುರುಗಳೆ, ನಾನು ಈಗ ಚೆನ್ನಾಗಿರುವೆನು, ನೀವು ನನಗೆ ಕೊಟ್ಟ ಬೋಧನೆಗೆ ಎಂದೆಂದಿಗೂ ನಾನು ಋಣಿ. ನೀವು ನೀಡಿದ ಸಲಹೆಯನ್ನು ಅನುಸರಿಸಿ ಈಗ ನನಗೆ ಒಳ್ಳೆಯದಾಗಿದೆ. ನಾಲ್ಕು ಕೈಗಳನ್ನುಳ್ಳ ಸುಂದರ ಮೂರ್ತಿಯನ್ನು ಹಲವು ಬಾರಿ ನನ್ನ ಕುರಿಯಲ್ಲಿ ಕಂಡಿದ್ದೇನೆ. ನನಗೆ ಅದರಿಂದ ಪರಮಾನಂದವಾಗಿದೆ” ಎಂದ.