Featured
ಭಕ್ತರ ಮೇಲೆ ಶ್ರೀಕೃಷ್ಣನ ಅಕ್ಕರೆ

ಬರಹ: ವಿದ್ವಾನ್ ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ ಮತ್ತು ಖ್ಯಾತ ವಾಸ್ತು ತಜ್ಞರು
ಮಹಾಭಾರತ ಯುದ್ಧ ಶುರುವಾಗಿ ಒಂಭತ್ತು ದಿನಗಳಾಗಿದ್ದವು. ಕೌರವರ ಕಡೆಯಿಂದ ಯುದ್ಧ ಮುನ್ನಡೆಸುತ್ತಿದ್ದ ಭೀಷ್ಮ ಪಿತಾಮಹನಿಂದ ಪಾಂಡವರಿಗೆ ಹಾನಿಯಾಗಿರಲಿಲ್ಲ. ದುರ್ಯೋಧನನು ಈ ವಿಷಯವನ್ನಿಟ್ಟುಕೊಂಡು ಭೀಷ್ಮರನ್ನು ಮೂದಲಿಸುತ್ತಾ “ನೀವು ಕೌರವ ಸೇನೆಯಲ್ಲಿದ್ದರೂ ಪಾಂಡವರ ಪಕ್ಷಪಾತಿ. ಆದ್ದರಿಂದಲೇ ಅರೆಮನಸ್ಸಿನಿಂದ ಪಾಂಡವರ ವಿರುದ್ಧ ನೆಪಮಾತ್ರಕ್ಕೆ ಯುದ್ಧ ಮಾಡುತ್ತಿದ್ದೀರಿ. ಪಾಂಡವರನ್ನು ಕೊಂದು ಯುದ್ಧ ಗೆಲ್ಲಬೇಕೆಂಬ ಇಚ್ಛೆಯೇ ನಿಮಗಿಲ್ಲ” ಎಂದನು.
ಅದನ್ನು ಕೇಳಿ ಅವಮಾನಿತರಾದ ಭೀಷ್ಮರು ಮಾರನೇ ದಿನವೇ ಪಾಂಡವರನ್ನು ಯುದ್ಧದಲ್ಲಿ ಕೊಲ್ಲುತ್ತೇನೆಂದು ಭರವಸೆ ನೀಡಿದರು. ದುರ್ಯೋಧನನು ಸಂತೋಷದಿಂದ ಹೊರಟುಹೋದನು. ಈ ಭಯಂಕರ ಸುದ್ದಿ ಅಂದೇ ರಾತ್ರಿ ಪಾಂಡವರಿಗೆ ತಲುಪಿತು. ಅವರಲ್ಲಿ ಯಾರೂ ಭೀಷ್ಮರನ್ನು ಎದುರಿಸಿ ಯುದ್ಧ ಗೆಲ್ಲುವಷ್ಟು ಸಮರ್ಥರಾಗಿರಲಿಲ್ಲ. ದ್ರೌಪದಿ ಕೂಡ ಪಾಂಡವರ ಮೇಲೆರಗಿದ್ದ ಆಪತ್ತನ್ನು ನೆನೆದು ತೀವ್ರವಾಗಿ ದುಃಖಿಸಿದಳು. ಅವಳು ಭಕ್ತಿಯಿಂದ ಕೃಷ್ಣನನ್ನು ಈ ಪರಿಸ್ಥಿತಿಯಿಂದ ಪಾರುಗಾಣಿಸುವಂತೆ ಪ್ರಾರ್ಥಿಸತೊಡಗಿದಳು.

ಕೃಷ್ಣ ಪರಮಾತ್ಮನು ದ್ರೌಪದಿಯ ಕರೆಗೆ ಓಗೊಟ್ಟು ಅಲ್ಲಿ ಪ್ರತ್ಯಕ್ಷವಾಗಿ ತನ್ನನ್ನು ಹಿಂಬಾಲಿಸುವಂತೆ ದ್ರೌಪದಿಗೆ ಹೇಳಿದನು. ಕತ್ತಲಲ್ಲಿ ರಣಭೂಮಿಯಲ್ಲಿ ಇಬ್ಬರೂ ನಡೆದುಕೊಂಡೇ ಹೋದರು. ಅನೇಕ ಹೆಣಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅವರು ಒಂದು ಡೇರೆಯ ಹತ್ತಿರಕ್ಕೆ ಬರುತ್ತಿದ್ದಂತೆಯೇ…
ಕೃಷ್ಣನು “ತಂಗಿ, ನಿನ್ನ ಪಾದರಕ್ಷೆಗಳನ್ನು ಕಳಚಿಡು. ಅವು ಸದ್ದು ಮಾಡುತ್ತಿವೆ” ಎಂದನು. ದ್ರೌಪದಿ ಪಾದರಕ್ಷೆಗಳನ್ನು ತೆಗೆದಿಟ್ಟಳು. ಕೃಷ್ಣನು “ಹುಷ್! ವೃದ್ಧನೊಬ್ಬ ಒಳಗಡೆ ಅತ್ತಿಂದಿತ್ತ ಓಡಾಡುತ್ತಿದ್ದಾನೆ. ಶಬ್ದ ಮಾಡದೆ ಅವನಿಗೆ ನಮಸ್ಕರಿಸು” ಎಂದನು.
ದ್ರೌಪದಿ ಭೀಷ್ಮನಿಗೆ ನಮಸ್ಕರಿಸಿದಳು. ಅವಳಾರೆಂದು ತಿಳಿಯುವ ಮುನ್ನವೇ ಭೀಷ್ಮರು ಅವಳನ್ನು ಆಶೀರ್ವದಿಸಿದರು: “ದೀರ್ಘ ಸುಮಂಗಲೀಭವ! ನೀನಾರು? ಮೇಲೇಳು, ನನ್ನಿಂದಾಗಬೇಕು?”
“ನಿಮ್ಮಿಂದ ನನ್ನ ಗಂಡಂದಿರಿಗೆ ಪ್ರಾಣಭಿಕ್ಷೆ ಬೇಕು” ಎನ್ನುತ್ತಾ ಮೇಲೆದ್ದಾಗ ಅವಳು ದ್ರೌಪದಿಯೆಂದು ತಿಳಿದು ಭೀಷ್ಮರಿಗೆ ಆಶ್ಚರ್ಯವಾಯಿತು. “ನೀನು ಕಗ್ಗತ್ತಲಲ್ಲಿ ಇಲ್ಲಿಗೆ ಬರಲು ಕಾರಣವೇನು? ಒಬ್ಬಳೇ ಬಂದೆಯಾ?” ಎಂದು ಕೇಳಿದರು. ದ್ರೌಪದಿ “ನಿಮ್ಮ ಆಶೀರ್ವಾದ ಪಡೆಯಲು ಬಂದೆ. ನನ್ನ ಜೊತೆಗೆ ಕೃಷ್ಣನೂ ಬಂದಿರುವನು” ಎಂದಳು.
ಅಷ್ಟರಲ್ಲಿ ಕೃಷ್ಣ ಬಾಗಿಲ ಹತ್ತಿರ ನಿಂತಿರುವುದನ್ನು ಭೀಷ್ಮರು ನೋಡಿ ಕರೆದರು: “ಬಾ ಕೃಷ್ಣ! ಒಳಗೆ ಬಾ! ಬಾಗಿಲಲ್ಲೇ ಏಕೆ ನಿಂತಿರುವೆ? ಇದು ನಿನ್ನದೇ ಯೋಜನೆ ಎಂದು ನನಗೀಗ ತಿಳಿಯಿತು. ನಿನ್ನ ಭುಜದ ಮೇಲೆ ನೇತಾಡುತ್ತಿರುವುದೇನು? ಪಾದರಕ್ಷೆಗಳಂತೆ ಇವೆ !”
ಕೃಷ್ಣನು “ಹೌದು! ಪಾಂಚಾಲಿಯವು. ಶಬ್ದವಾಗಬಾರದೆಂದು ತೆಗೆದಿಟ್ಟುಕೊಂಡಿದ್ದೆ” ಎಂದನು. ತನ್ನ ಪಾದರಕ್ಷೆಗಳನ್ನು ಕೃಷ್ಣನು ಹೊತ್ತಿರುವುದನ್ನು ನೋಡಿ ದ್ರೌಪದಿ ಹೌಹಾರಿದಳು: “ದೇವಾ! ಇವತ್ತು ನಿನ್ನಿಂದ ನನಗೆ ಮಹಾಪಾಪ ಬಂದಿತು” ಎಂದಳು. ಕೃಷ್ಣನು “ಅಣ್ಣ ತಂಗಿಯ ಪಾದುಕೆಗಳನ್ನು ಹೊತ್ತರೆ ಏನೂ ಬಾಧಕವಿಲ್ಲ. ಅದರ ಬಗ್ಗೆ ಚಿಂತಿಸಬೇಡ. ಭೀಷ್ಮರ ಆಶೀರ್ವಾದ ಪಡೆದೆಯಾ?” ಎಂದು ಕೇಳಿದನು.
ಭೀಷ್ಮರು “ಕೃಷ್ಣ, ಅವಳು ಏನನ್ನೂ ಬೇಡಲಿಲ್ಲ. ಅವಳ ಕೋರಿಕೆಯನ್ನು ಕೇಳದೆಯೇ ನಾನು ದೀರ್ಘ ಕಾಲ ಸುಮಂಗಲಿಯಾಗಿ ಇರು ಎಂದು ಆಶೀರ್ವದಿಸಿಬಿಟ್ಟೆ. ನೀನು ಎಲ್ಲ ಕಾರ್ಯಗಳನ್ನು ನಿನ್ನದೇ ಆದ ರೀತಿಯಲ್ಲಿ ಸಾಧಿಸುವೆ” ಎಂದರು. ಕೃಷ್ಣನು “ಅವಳು ನಿಮ್ಮಿಂದ ಆ ರೀತಿ ಆಶೀರ್ವಾದ ಪಡೆಯಲು ಸಾಧ್ಯವಾಗಿದ್ದು ಅವಳ ಪುಣ್ಯ. ಈಗ ಪಾಂಡವರು ದೀರ್ಘಕಾಲ ಬಾಳುವರು” ಎಂದನು.
ಭೀಷ್ಮರು “ಕೃಷ್ಣ! ಭಕ್ತರ ರಕ್ಷಣೆಯಲ್ಲಿ ನಿನಗಿರುವ ತವಕ ಇನ್ನಾರಿಗೂ ಇಲ್ಲ. ನೀನು ಭಕ್ತರ ಪಾದುಕೆಗಳನ್ನೂ ಹೊರುವೆ. ನಿನ್ನಲ್ಲಿ ಶರಣಾದವರೇ ಧನ್ಯರು.” ಎನ್ನುತ್ತಾ ದ್ರೌಪದಿಯ ಕಡೆಗೆ ತಿರುಗಿ “ಭಗವಂತನೇ ಸ್ವಯಂ ಪಾಂಡವರನ್ನು ರಕ್ಷಿಸುತ್ತಿರುವಾಗ ಈ ಬಡಪಾಯಿ ಭೀಷ್ಮ ಏನು ಮಾಡಿಯಾನು?” ಎಂದು ಅವಳನ್ನು ಆಶೀರ್ವದಿಸಿದರು. ಅವರ ಅನುಮತಿಯನ್ನು ಪಡೆದು ಕೃಷ್ಣ-ದ್ರೌಪದಿಯರು ಅಲ್ಲಿಂದ ಹೊರಟರು.
ಅವರು ಹೋಗುವುದನ್ನೇ ದಿಟ್ಟಿಸಿ ನೋಡುತ್ತಿದ್ದ ಭೀಷ್ಮರು “ಪರಂಧಾಮ! ಭಕ್ತವತ್ಸಲ! ದಯಾಸಮುದ್ರ! ಕೃಪಾಸಾಗರ! ನಿನ್ನ ಭಕ್ತರನ್ನು ಕಾಪಾಡಲು ನೀನು ಎಂತಹ ಕೀಳು ಕೆಲಸವನ್ನೂ ಮಾಡಲು ಹಿಂಜರಿಯೆ!” ಎಂದು ತಮಗೆ ತಾವೇ ಆಶ್ರುನಯನರಾಗಿ ಹೇಳಿಕೊಳ್ಳುತ್ತಾ ಗದ್ಗದಿತರಾದರು.
You may like

ತುಂಬಿದ ಕೃಷ್ಣೆಗೆ ಸಿಎಂ ಯಡಿಯೂರಪ್ಪ ಬಾಗಿನ ಸಮರ್ಪಣೆ:ಸಚಿವರೊಂದಿಗೆ ವೈಮಾನಿಕ ಸಮೀಕ್ಷೆ

ಮರಣ ಭಯ ಸದಾ ಇರಲಿ

ಯಾದಗಿರಿಯಲ್ಲಿ ಪ್ರವಾಹ: ಛಾಯಾಭಗವತಿ ದೇಗುಲಕ್ಕೆ ಜಲದಿಗ್ಬಂಧನ- ದೇವಿಯ ಪಾದ ಸ್ಪರ್ಷಿಸಿದ ಕೃಷ್ಣೆ

ಕೃಷ್ಣಾ ನದಿ ಪ್ರವಾಹ ಹೆಚ್ಚಳ ಸಾಧ್ಯತೆ: ಸಂಭಾವ್ಯ ಪ್ರವಾಹ ಎದುರಿಸಲು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಸೂಚನೆ

ಯಾದಗಿರಿಯಲ್ಲಿ ತುಂತುರು ಮಳೆ: ಜನಜೀವನ ಅಸ್ತವ್ಯಸ್ತ: ಬೆಳೆ ನಾಶದ ಭಯ

ಕೃಷ್ಣ ನದಿ ತೀರದ ಗ್ರಾಮಗಳಿಗೆ ಮತ್ತೆ ಪ್ರವಾಹದ ಭೀತಿ: 1.36 ಲಕ್ಷ ಕ್ಯುಸೆಕ್ ನೀರು ಹರಿಬಿಡುವ ಸಾಧ್ಯತೆ
















