Featured
ಮಹಾರಾಷ್ಟ್ರದಲ್ಲಿ ಭಾರೀ ಮಳೆ- ಕೃಷ್ಣಾ ನದಿಯ ಒಳಹರಿವು ಹೆಚ್ಚಳ- ಆಲಮಟ್ಟಿ ಜಲಾಶಯದಿಂದ 2.05ಲಕ್ಷ ಕ್ಯುಸೆಕ್ ನೀರು ಹೊರಕ್ಕೆ
ರೈಸಿಂಗ್ ಕನ್ನಡ:
ವಿಜಯಪುರ:
ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಆಗುತ್ತಿರುವ ಮಳೆಯಿಂದ ಕೃಷ್ಣಾ ನದಿಯ ಒಳಹರಿವಿನಲ್ಲಿ ಭಾರೀ ಏರಿಕೆಯಾಗಿದೆ. ಮಹಾರಾಷ್ಟ್ರದ ಮಹಾಬಳೇಶ್ವರ, ಪಾತಗಾಂವ, ನವಜಾ, ರಾಧಾನಗರಿ, ಕೊಯ್ನಾ, ಕಾಸರಿ, ತುಳಸಿ, ದೂಧಗಂಗಾ, ವರಣಾದಲ್ಲಿ ಸಾಕಷ್ಟು ಮಳೆಯಾಗಿದ್ದು ಮಂಗಳವಾರ ಸಂಜೆ ಆಲಮಟ್ಟಿ ಜಲಾಶಯಕ್ಕೆ 2.05 ಲಕ್ಷ ಕ್ಯುಸೆಕ್‌ಗಿಂತಲೂ ಅಧಿಕ ನೀರು ಹರಿದು ಬರುತ್ತಿದೆ.
ಮಹಾರಾಷ್ಟ್ರದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ಹಾಗೂ ಬೆಳಗಾವಿಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆ ಸುರಿದ ಪರಿಣಾಮ ಕೃಷ್ಣಾ ನದಿಗೆ ಒಳಹರಿವು ಹೆಚ್ಚಳವಾಗಲು ಕಾರಣವಾಗಿದೆ. ಮುಂಜಾಗ್ರತೆ ಕ್ರಮವಾಗಿ ಮಂಗಳವಾರ ಸಂಜೆ 2.50 ಲಕ್ಷ ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಹರಿಸಲಾಗುತ್ತಿದೆ.
ಗರಿಷ್ಠ 519.60 ಮೀಟರ್ ಎತ್ತರದಲ್ಲಿ 123.081 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಮಂಗಳವಾರ ಸಂಜೆ 518.18 ಮೀಟರ್ ಎತ್ತರದಲ್ಲಿ 100.345 ಟಿಎಂಸಿ ನೀರು ಸಂಗ್ರಹವಾಗಿದೆ. 2,05,578 ಕ್ಯೂಸೆಕ್ ಒಳಹರಿವು ಇದ್ದು ಜಲಾಶಯದ ಗೇಟ್‌ಗಳು ಹಾಗೂ ಜಲಾಶಯದ ಬಲಭಾಗದಲ್ಲಿರುವ ಕೆಪಿಸಿಎಲ್ ಮೂಲಕ 2.50 ಲಕ್ಷ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ