ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಕಾಂಗ್ರೆಸ್ ಪಕ್ಷದ ಮಹತ್ವದ ಕಾರ್ಯಕಾರಿ ಸಮಿತಿ ಸಭೆ ಸೋಮವಾರ ನಡೆಯಲಿದೆ. ಪಕ್ಷದ ಆಂತರಿಕ ಬೇಗುದಿ ಹಾಗೂ ನಾಯಕತ್ವದ ಕುರಿತು ಸುಮಾರು 20 ಹಿರಿಯ ನಾಯಕರು, ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಸೋಮವಾರದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಯುವ ಸಾಧ್ಯತೆ ಹೆಚ್ಚಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ವರ್ಚುವಲ್ ಸಭೆ ಕರೆಯಲಾಗಿದ್ದು, ಪ್ರಸಕ್ತ ರಾಜಕೀಯ ಬೆಳವಣಿಗೆಗಳು ಹಾಗೂ ಪಕ್ಷದ ಭವಿಷ್ಯದ ದಾರಿಯ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗುವುದು. ಪ್ರಮುಖವಾಗಿ ಪಕ್ಷಕ್ಕೆ ಸೂಕ್ತ ಹಾಗೂ ಖಾಯಂ ನಾಯಕತ್ವ ನೀಡಲು ಹಲವು ಧುರೀಣರು ಆಗ್ರಹಿಸುತ್ತಿದ್ದು, ರಾಹುಲ್ ಗಾಂಧಿ ಅವರನ್ನೇ ಪಕ್ಷದ ಮುಖ್ಯಸ್ಥರನ್ನಾಗಿ ಮರು ಆಯ್ಕೆ ಮಾಡಬೇಕು ಎಂದು ಒಂದು ಬಣ ವಾದಿಸುತ್ತಿದೆ.