Featured
ಚಾರುಮತಿಯ ಪುರಾಣ, ವರಮಹಾಲಕ್ಷ್ಮಿಯ ವರ- ಶ್ರಾವಣ ಹಬ್ಬದ ವಿಶೇಷತೆ ಏನು? ತಯಾರಿ ಹೇಗೆ ಮಾಡಬೇಕು..?
![](https://risingkannada.com/wp-content/uploads/2020/07/Varamahalaxmi1-1.jpg)
ಶ್ರಾವಣ ಮಾಸ ಬಂತೆಂದರೆ ಹಬ್ಬಗಳ ಮಾಸವಾಗಿದೆ. ಪ್ರತಿಯೊಂದು ಹಬ್ಬದಲ್ಲೂ ಮನೆಯಲ್ಲಿ ಸಡಗರ ಸಂಭ್ರಮದಿಂದ ಕೂಡಿರುತ್ತದೆ. ಅದರಲ್ಲೂ ಶ್ರಾವಣ ಮಾಸದಲ್ಲಿ ಎರಡನೇ ಶುಕ್ರವಾರ ಬರುವ ಈ ವರಲಕ್ಷ್ಮಿ ವ್ರತವನ್ನು ಎಲ್ಲಾ ಮುತ್ತೈದೆಯರು ಭಕ್ತಿ ಶ್ರದ್ಧೆಯಿಂದ ಆಚರಿಸುತ್ತಾರೆ.
![](https://risingkannada.com/wp-content/uploads/2020/07/Nagarabhavi.jpg)
ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ
ಪುರಾಣದಲ್ಲಿ ಚಾರುಮತಿ ಎಂಬ ಸ್ತ್ರೀಯೊಬ್ಬಳು ನಿಸ್ವಾರ್ಥವಾಗಿ ತನ್ನ ಅತ್ತೆ-ಮಾವಂದಿರ ಸೇವೆ ಮಾಡುತ್ತಿರುತ್ತಾಳೆ. ಇದನ್ನು ಕಂಡು ಆಕೆಯ ಶ್ರದ್ಧೆಗೆ ಒಲಿದ ಲಕ್ಷ್ಮಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ನನ್ನನ್ನು ಆರಾಧಿಸು, ನಿನ್ನ ಇಷ್ಟಾರ್ಥಗಳನ್ನು ಪೂರೈಸುತ್ತೇನೆ ಎನ್ನುತ್ತಾಳೆ. ಆ ಕಾರಣ ಚಾರುಮತಿ ಶ್ರಾವಣ ಮಾಸದ ಹುಣ್ಣಿಮೆಗೂ ಮೊದಲ ಶುಕ್ರವಾರ ವರಮಹಾಲಕ್ಷ್ಮಿಯನ್ನು ಆರಾಧಿಸಿ ತನ್ನ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾಳೆ.
ಲಕ್ಷ್ಮಿಯು ಕ್ಷೀರ ಸಾಗರದಿಂದ ಅವತಾರ ತಾಳಿದ್ದಾಳೆ ಎನ್ನುವ ಕಥೆಯಿದೆ. ರಾಕ್ಷಸರು ಹಾಗೂ ದೇವತೆಗಳು ಅಮೃತ ಪಡೆಯುವುದಕ್ಕಾಗಿ ವಾಸುಕಿಯ ಸಹಾಯದೊಂದಿಗೆ ಮಂದಾರ ಪರ್ವತವನ್ನು ಕಡೆಯುತ್ತಿರುವಾಗ ಕ್ಷೀರಸಾಗರದಲ್ಲಿ ಪರಿಶುದ್ಧವಾಗಿ ಶ್ವೇತವರ್ಣದಲ್ಲಿ ಲಕ್ಷ್ಮೀ ಉದ್ಭವಿಸುತ್ತಾಳೆ. ಆದ್ದರಿಂದಲೇ ಇಷ್ಟಾರ್ಥಗಳನ್ನು ಪೂರೈಸುವ ಲಕ್ಷ್ಮಿಯ ಆರಾಧನೆಗಾಗಿ ಈ ಹಬ್ಬವಾಗಿದೆ. ಪ್ರತಿವರ್ಷವೂ ಲಕ್ಷ್ಮಿಯನ್ನು ಶ್ರದ್ಧೆ-ಭಕ್ತಿಯಿಂದ ಆರಾಧಿಸುವುದರಿಂದ ಸಕಲ ಇಷ್ಟಾರ್ಥವೂ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.
ವೃತ ಹೇಗೆ ಮಾಡಬೇಕು..?
ಲಕ್ಷ್ಮಿ ಎಂದರೆ ಶುದ್ಧತೆಯ ಸಂಕೇತವಾಗಿದೆ. ಹೀಗಾಗಿ ಹಬ್ಬದ ದಿನದಂದು ಮುಂಜಾನೆ ಎದ್ದು ಮನೆಯನ್ನು ಶುಚಿಗೊಳಿಸಿ, ರಂಗೋಲಿ, ತಳಿರು ತೋರಣಗಳಿಂದ ಅಲಂಕರಿಸಿ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ತೊಟ್ಟು ಮಡಿಯಲ್ಲಿ ನೈವೇದ್ಯವನ್ನು ತಯಾರಿಸಲಾಗುತ್ತದೆ. ಸಣ್ಣ ಉಕ್ಕಿನ ಬಿಂದಿಗೆ ಅಥವಾ ಬೆಳ್ಳಿ ಚೆಂಬನ್ನು ಕಲಶದ ರೂಪದಲ್ಲಿ ಇಟ್ಟು ಅದರಲ್ಲಿ ನೀರನ್ನು ತುಂಬಿಸಿ ಅದಕ್ಕೆ ಸ್ವಲ್ಪ ಖರ್ಜೂರ ಹಾಗೂ ದ್ರಾಕ್ಷಿಯನ್ನು ಹಾಕಬೇಕು. ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹರಡಿ ಅದರಲ್ಲಿ ಕಲಶವನ್ನು ಇಟ್ಟು, ಮಾವಿನ ಎಲೆ ಹಾಗೂ ವೀಳ್ಯೆದೆಲೆಯನ್ನು ಕಲಶದ ಸುತ್ತ ಜೋಡಿಸಿ ಅದರ ಮೇಲೆ ಅರಿಶಿಣ ಹಚ್ಚಿದ ತೆಂಗಿನಕಾಯಿಯನ್ನು ಇಟ್ಟು ಅದಕ್ಕೆ ಶ್ವೇತವರ್ಣದ ಕೆಂಪು ಅಂಚಿನ ಸೀರೆಯನ್ನು ಉಡಿಸಿ ಅಲಂಕರಿಸುತ್ತಾರೆ. ಜೊತೆ ಒಡವೆಗಳನ್ನು ಹಾಕಿ ಸಿಂಗಾರಗೊಳಿಸುತ್ತಾರೆ.
ಶುಕ್ರವಾರ ವರಮಹಾಲಕ್ಷ್ಮಿಯನ್ನು ಬ್ರಾಹ್ಮೀ ಲಗ್ನದಲ್ಲಿ ಪ್ರತಿಷ್ಠಾಪನೆ ಮಾಡಬೇಕು, ಮುಂಜಾನೆ 4:40 ರಿಂದ 5.30 ರವರೆಗೂ ಬ್ರಾಹ್ಮೀ ಲಗ್ನದ ಮುಹೂರ್ತವಿದೆ. ಇದೇ ಮುಹೂರ್ತದಲ್ಲಿ ಲಕ್ಷ್ಮಿಯನ್ನು ಕೂರಿಸಿ ಪೂಜೆ ಸಲ್ಲಿಸಬೇಕು. ಈ ಮುಹೂರ್ತದಲ್ಲಿ ಲಕ್ಷ್ಮಿಯನ್ನು ಕೂರಿಸಿ ಪೂಜೆ ಮಾಡಿದರೆ ನಮ್ಮ ಪ್ರಾರ್ಥನೆ ದೇವಿಗೆ ತಲುಪಿ, ನಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ ಎನ್ನುವ ನಂಬಿಕೆಯಿದೆ.
ಲಕ್ಷ್ಮಿಗೆ ಹೂವುಗಳೆಂದರೆ ಬಹಳ ಪ್ರೀತಿ. ಅದರಲ್ಲೂ ಕಮಲದ ಹೂವು ಹಾಗೂ ಬಿಲ್ವಪತ್ರೆ ಎಂದರೆ ಲಕ್ಷ್ಮಿಗೆ ತುಂಬಾ ಪ್ರೀತಿ. ಹೀಗಾಗಿ ವ್ರತ ಮಾಡುವವರು ಈ ಹೂವನ್ನು ತಪ್ಪದೆ ತಾಯಿಯ ಬಳಿಯಿಟ್ಟು ಪೂಜೆ ಮಾಡುತ್ತಾರೆ. ಲಕ್ಷ್ಮಿ ಮುಂದೆ ಹಣ, ಚಿನ್ನ, ಬಳೆ, ಹಣ್ಣು, ಸ್ವೀಟ್, ಅರಿಶಿಣ, ಕುಂಕುಮ, ಎಲ್ಲವನ್ನು ಇಡುತ್ತಾರೆ.
ಬಿಲ್ವ ವೃಕ್ಷದಲ್ಲಿ ಲಕ್ಷ್ಮಿ ನೆಲೆಸಿದ್ದಾಳೆ ಎಂಬುದು ನಂಬಿಕೆಯಾಗಿದೆ. ಹೀಗಾಗಿ ಬಿಲ್ವ ಪತ್ರೆಯಿಂದ ಪೂಜೆ ಮಾಡಿದರೆ ತಾಯಿ ಒಲಿಯುವಳೆಂಬ ಪ್ರತೀತಿಯೂ ಇದೆ. ವರಲಕ್ಷ್ಮಿ ಎಂದರೆ ವರಗಳನ್ನು ಕೊಡುವವಳು ಎಂದು ಕೂಡ ಹೇಳುತ್ತಾರೆ. ಸಾಮಾನ್ಯವಾಗಿ ಲಕ್ಷ್ಮೀ ಪೂಜೆಯನ್ನು ಗೋಧೂಳಿ ಸಮಯದಲ್ಲಿ ಮಾಡಿದರೆ ಶ್ರೇಷ್ಠ. ಈ ವ್ರತವನ್ನು ಯಾರು ನಿಷ್ಠೆಯಿಂದ ಮಾಡುತ್ತಾರೋ ಅವರಿಗೆ ಹಾಗೂ ಅವರ ಮನೆಯವರಿಗೆಲ್ಲರಿಗೂ ಒಳ್ಳೆಯದಾಗುತ್ತದೆಂದೂ ಹಾಗೂ ಎಲ್ಲಾ ಕೆಲಸದಲ್ಲಿ ಏಳಿಗೆ ಆಗುತ್ತದೆಂಬ ನಂಬಿಕೆಯೂ ಇದೆ. ಹೀಗಾಗಿ ನಮ್ಮ ಪೂರ್ವಿಕರು ಎಲ್ಲಿ ತನು, ಮನ, ಮನೆ ಶುದ್ಧವಾಗಿರುತ್ತದೋ ಅಲ್ಲಿ ಲಕ್ಷ್ಮಿಯು ನೆಲೆಸುತ್ತಾಳೆ ಎಂಬ ನಂಬಿಕೆಯನ್ನು ಹೊಂದಿದ್ದರು.
ಲಕ್ಷ್ಮಿಗೆ ಪ್ರಿಯವಾದ ಧಾನ್ಯವೆಂದರೆ ಕಡಲೆಬೇಳೆ. ಆದ್ದರಿಂದ ವರಮಹಾಲಕ್ಷ್ಮಿ ಹಬ್ಬದ ದಿನದಂದು ನೈವ್ಯೇದ್ಯಕ್ಕೆ ಕಡಲೆಬೇಳೆಯಿಂದ ತಯಾರಿಸಿದ ಪಾಯಸ, ಹೋಳಿಗೆ ಇತ್ಯಾದಿ ಸಿಹಿ ತಿನಿಸುಗಳನ್ನು ದೇವರಿಗೆ ಅರ್ಪಿಸುತ್ತಾರೆ. ವ್ರತದ ನೇಮದ ಪ್ರಕಾರ ಪೂಜೆಯ ಸಿದ್ಧತೆಗಳೆಲ್ಲ ಆದ ನಂತರ ಮೊದಲು ವಿಘ್ನಕಾರಕನಾದ ಗಣಪತಿಯನ್ನು ಪೂಜಿಸಿ ನಂತರ ಯಮುನಾ ಪೂಜೆ ಅಂದರೆ ಶ್ರೇಷ್ಠವಾದ ನದಿಯ ನೀರನ್ನು ತಂದು ಪೂಜೆ ಮಾಡುತ್ತಾರೆ. ಇದಾದ ಮೇಲೆ ವರಲಕ್ಷ್ಮಿ ವ್ರತವನ್ನು ಆರಂಭಿಸುತ್ತಾರೆ. ಮನೆಗೆ ಮುತ್ತೈದೆಯರನ್ನು ಕರೆದು ಅರಿಶಿಣ, ಕುಂಕುಮ, ಸಿಹಿ ಕೊಡುತ್ತಾರೆ. ಇದೇ ರೀತಿ ಮದುವೆಯಾದ ಹೆಣ್ಣು ಮಕ್ಕಳು ಮೊದಲನೇ ವರ್ಷದಿಂದ ಒಂಬತ್ತು ವರ್ಷದವರೆಗೆ ಶ್ರದ್ಧೆಯಿಂದ ವ್ರತವನ್ನಾಚರಿಸಿ ಒಂಬತ್ತನೇ ವರ್ಷ ವ್ರತವನ್ನು ಮುಗಿಸುತ್ತಾರೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್