Featured
ಕಿಮ್ಸ್ ವೈದ್ಯ ತಂಡದ ಮೆಚ್ಚುಗೆ ಕಾರ್ಯ- ಜಿಲ್ಲಾಧಿಕಾರಿಗಳಿಂದ ಪ್ರಶಂಸೆ

ರೈಸಿಂಗ್ ಕನ್ನಡ:
ಹುಬ್ಬಳ್ಳಿ-ಧಾರಾವಾಡ:
ಕೊರೊನಾ ಪಾಸಿಟಿವ್ ಇರುವ ಗರ್ಭಿಣಿ ಹೆಂಗಸರು ಭಯಪಡಬೇಕಿಲ್ಲ. ಇದಕ್ಕೀಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಎಷ್ಟೇ ಜಾಗಾರೂಕರಾಗಿದ್ದರೂ ಇತ್ತೀಚೆಗೆ ಕೊರೊನಾ ಎಲ್ಲಾ ಕಡೆ ಹಬ್ಬುತ್ತಿದೆ. ತುಂಬು ಗರ್ಭಿಣಿಯರಿಗಂತೂ ಆಸ್ಪತ್ರೆ ಕಡೆ ಹೋಗಲು ಭಯ, ಆದ್ರೆ ವಿಧಿಯಿಲ್ಲ.. ಹೋಗಲೇ ಬೇಕು ಅನ್ನುವ ಅನಿವಾರ್ಯತೆ ಕೂಡ. ಈ ಮಧ್ಯೆ ಕೋವಿಡ್ ಪಾಸಿಟಿವ್ ಸೋಂಕು ಕಾಣಿಸಿಕೊಂಡಿರುವ, ಧಾರಾವಾಡ ಜಿಲ್ಲೆಯ ತುಂಬು ಗರ್ಭಿಣಿಗೆ ಯಶಸ್ವಿ ಹೆರಿಗೆಯಾಗಿದೆ.
ಧಾರಾವಾಡ ಜಿಲ್ಲೆಯ ಗರ್ಭಿಣಿಗೆ 39 ವಾರಗಳು ಹಾಗೂ 04 ದಿನಗಳು ಪೂರ್ಣಗೊಂಡಿತ್ತು. ಸಹಜ ಹೆರಿಗೆ ಸಾಧ್ಯವಿಲ್ಲದ ಲಕ್ಷಣಗಳಿದ್ದುದರಿಂದ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸುವಲ್ಲಿ ಕಿಮ್ಸ್ ವೈದ್ಯರ ತಂಡ ಯಶಸ್ವಿಯಾಗಿದೆ.
ಕಿಮ್ಸ್ ನಲ್ಲಿ ಇಂದು ಬೆಳಿಗ್ಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆಯಾಗಿದ್ದು, 3.5 ಕೆ.ಜಿ. ತೂಕದ ಹೆಣ್ಣು ಮಗುವಿಗೆ ತಾಯಿ ಜನ್ಮ ನೀಡಿದ್ದಾಳೆ. ವಿಭಾಗದ ಮುಖ್ಯಸ್ಥೆ ಡಾ.ಕಸ್ತೂರಿ ಡೋಣಿಮಠ, ಶಸ್ತ್ರಚಿಕಿತ್ಸಕ ಡಾ.ವೈ.ಎಂ.ಕಬಾಡಿ, ಅರವಳಿಕೆ ತಜ್ಞೆ ಡಾ.ವೀಣಾ , ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಾದ ಡಾ. ಅಕ್ಷತಾ ನಿಂಗನೂರೆ, ಡಾ.ಸಹನಾ, ಡಾ.ರೂಪಾ, ನರ್ಸಿಂಗ್ ವಿಭಾಗದ ಶ್ವೇತಾ, ರೇಷ್ಮಾ , ಸಹಾಯಕ ಸಿಬ್ಬಂದಿ ಕಳಕಪ್ಪ ಮತ್ತಿತರರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.
ಕಿಮ್ಸ್ ತಜ್ಞರ ಕಾರ್ಯಕ್ಕೆ ಜಿಲ್ಲಾಧಿಕಾರಿಗಳಾದ ದೀಪಾ ಚೋಳನ್, ಕಿಮ್ಸ್ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರಠಾಣಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.