Featured
ವೆಂಕಟರಮಣ ಹುಚ್ಚ ವೆಂಕಟ್ ಹೇಗಾದ..? ಓದಲೇ ಬೇಕು ಈ ಸ್ಟೋರಿ
![](https://risingkannada.com/wp-content/uploads/2019/08/huccha-venkat.jpg)
ವೆಂಕಟರಮಣ ಲಕ್ಷ್ಮಣ್ ಎಷ್ಟು ಚೆಂದದ ಹೆಸರು..! ಹೇಗೆ ಬದಲಾಯ್ತು ಹುಚ್ಚ ವೆಂಕಟ್ ಎಂದು..? ಇದೊಂದು ಕರುಣಾಜನಕ ಸ್ಟೋರಿ ಇದೆ. ಕೆಲವು ವರ್ಷಗಳ ಹಿಂದೆ ವೆಂಕಟ್ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ, ಟಿವಿ ನೋಡದಿರುವವರಿಗೆ ಈತ ಯಾರೆಂದು ಈಗಲೂ ತಿಳಿದಿಲ್ಲ, ಆತ ಒಬ್ಬ ನಟ, ನಿರ್ದೇಶಕ. ನೆನಪಿರಲಿ. ಈತ ಹುಚ್ಚ ಆಗದಿದ್ದರೆ ಸ್ಯಾಂಡಲ್ ವುಡ್‌ನಲ್ಲಿ ಒಳ್ಳೆ ಪ್ರತಿಭೆಯಾಗುತ್ತಿದ್ದ .
ತುಂಬು ಕುಟುಂಬದ ಪ್ರೀತಿಯ ಮಗ: ಹುಚ್ಚ ವೆಂಕಟ್ ಆ ಕಾಲಕ್ಕೆ ಫೇಮಸ್ ಪಿಡಬ್ಲ್ಯೂ ಡಿ ಕಾಂಟ್ರಾಕ್ಟರ್ ಆಗಿದ್ದ ಲಕ್ಷ್ಮಣ್ ಹಾಗೂ ಗೌರಮ್ಮ ಅವರ ಮಗ. ಏಳು ಮಕ್ಕಳಲ್ಲಿ ಈತ ಕೊನೆಯವನಾದ್ದರಿಂದ ಮನೆಯಲ್ಲೆಲ್ಲಾ ಸಿಕ್ಕಾಪಟ್ಟೆ ಪ್ರೀತಿ. ಇವರಿಗೆ ಬೆಂಗಳೂರಿನ ಇಂದಿರಾನಗರ, ಕನಕಪುರ ರಸ್ತೆಯಲ್ಲಿ ಮನೆಗಳಿವೆ ಹಾಗೂ ದೇವನಹಳ್ಳಿಯಲ್ಲಿ ಎಸ್ಟೇಟ್ ಕೂಡ ಇದೆ ಎಂದರೆ ಅವರ ಶ್ರೀಮಂತಿಕೆ ಎಷ್ಟು ಎಂಬುದು ಗೊತ್ತಾಗತ್ತೆ.
ಹುಟ್ಟುತ್ತಲೇ ತುಂಬಾ ಚುರುಕಾಗಿದ್ದ ವೆಂಕಟರಮಣ ಶಾಲಾ ದಿನಗಳಲ್ಲಿ ರ್ಯಾಂಕ್ ಸ್ಟೂಡೆಂಟ್, ಬೆಂಗಳೂರಿನ ಪ್ರತಿಷ್ಠಿತ ಕಾಲೇಜುಗಳಲ್ಲಿ ಆಂಗ್ಲ ಮಾಧ್ಯಮದಲ್ಲಿ ಓದಿದ ಈತ ಸಿವಿಲ್ ಎಂಜಿನಿಯರ್. ಎಂಜಿನಿಯರಿಂಗ್ ಮುಗಿದ ನಂತರ ಲೈಫ್ ಸ್ಟೈಲ್ ಶೋರೂಂನ ಮ್ಯಾನೇಜರ್ ಆಗಿದ್ದಾತ ಒಂದು ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯನ್ನೂ ತೆರೆದಿದ್ದ. ಆದರೆ ತನ್ನ ಅಣ್ಣ ಕುಶಾಲ್ ಬಾಬು ಕನ್ನಡ ಸಿನಿಮಾದಲ್ಲಿ ನಟನಾಗಿದ್ದರಿಂದ ಆತನ ಗೀಳು ಇವರಿಗೂ ದಾಟುತ್ತೆ. ನಂತರ ಬಣ್ಣ ಹಚ್ಚಲು ಅಡಿ ಇಡುತ್ತಾರೆ, ಗಾಂಧಿ ನಗರದ ಕದ ತಟ್ಟುತ್ತಾರೆ. ಎಲ್ಲಾ ಬಿಟ್ಟು ಸ್ವತಂತ್ರ್ಯ ಪಾಳ್ಯ ಅಂತ ಒಂದು ಸಿನಿಮಾ ಮಾಡ್ತಾರೆ. ಅದರಲ್ಲಿ ಇವರೇ ಆಲ್ ರೌಂಡರ್. ಸಿನಿಮಾ ನೆಲಕಚ್ಚುತ್ತಿದ್ದಂತೆ ಇವರ ಜೀವನವೂ ಬೀದಿ ಪಾಲಾಗುವ ಲಕ್ಷಣಗಳು ಕಂಡಿತು. ಆಗಲೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಅಲ್ಲಿಂದ ಸಿನಿಮಾ ಕಡೆ ತಲೆ ಹಾಕದ ಈತ ಮುಂದೆ ಮೆಂಟಲ್ ಮಂಜ ಸಿನಿಮಾಕ್ಕೆ ನಿರ್ಮಾಪಕ ಆಗ್ತಾರೆ, ಒಂದು ಪುಟ್ಟ ಪಾತ್ರನೂ ಮಾಡ್ತಾರೆ. ಸಿನಿಮಾ ತಕ್ಕಮಟ್ಟಿಗೆ ಹಿಟ್ ಆಯ್ತು, ಈ ಸಿನಿಮಾ ಇವರನ್ನ ಮತ್ತಷ್ಟು ಅಧೋಗತಿಗೆ ತೆಗೆದುಕೊಂಡು ಹೋಗುವ ಮುನ್ಸೂಚನೆ ಆಯ್ತು ಎನಿಸುತ್ತೆ.
ನಂತರ ಹುಚ್ಚ ವೆಂಕಟ್ ಅನ್ನುವ ಸಿನಿಮಾ ಮಾಡಿದರು, ಸಿನಿಮಾ ನೋಡಲು ಯಾರೂ ಬರಲಿಲ್ಲ, ಮಾಧ್ಯಮವೊಂದರ ಎದುರು ನನ್ನ ಎಕ್ಕಡ, ಥೂ ಅಂತ ಉಗಿದರು. ಸಿನಿಮಾ ಹೆಸರನ್ನೇ ತನಗೆ ಇಟ್ಟುಕೊಂಡರು. ನಂತರ ಚಿತ್ರನಟಿ ರಮ್ಯಾ ನನ್ನ ಹೆಂಡ್ತಿ ಅಂತ ಓಡಾಡಿಕೊಂಡಿದ್ದವರನ್ನ ಮಾಧ್ಯಮಗಳು ಇನ್ನಷ್ಟು ಇಂಬು ನೀಡಿ ಪೋಷಿಸಿದವು. ನಂತರ ಒಂದಾ ಎರಡಾ..? ಆತ ಎಲ್ಲೇ ಹೋದರೂ ಸುದ್ದಿ, ಸಾಲದು ಎಂಬಂತೆ ಯೋಗ್ ರಾಜ್ ಭಟ್ಟರು ಅವರನ್ನ ಸಿಂಗರ್ ಕೂಡ ಮಾಡಿಬಿಟ್ರು,
ಆಗಲೇ ಟಿಆರ್ ಪಿ ಪೀಸ್ ಆಗಿದ್ದ ಈತ ಬಿಗ್ ಬಾಸ್ ಗೂ ಎಂಟ್ರಿ ನೀಡಿ ಅಲ್ಲಿದ್ದವರ ಮೇಲೂ ಹಲ್ಲೆ ಮಾಡಿ ಹೊರಬಂದ. ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ಬಿಕಾರಿ ತರಹ ಅಲೆಯುತ್ತಿದ್ದವನನ್ನ ಪುನಃ ಮನೆಗೆ ಸೇರಿಸಲಾಗಿತ್ತು. ಆದರೆ ಈಗ ಮತ್ತೆ ರಾಜ್ಯದೆಲ್ಲೆಡೆ ಅಲೆಯುತ್ತಿದ್ದು ಮಂಡ್ಯದಿಂದ ಕೊಡಗಿಗೆ ತೆರಳಿ ಅಲ್ಲಿ ಕಾರ್ ಗ್ಲಾಸ್ ಒಡೆದು ರಂಪಾಟ ಮಾಡಿದ್ದಾನೆ. ಟಿವಿ ಮಾಧ್ಯಮದವರ ಕ್ಯಾಮೆರಾ ಮುಂದೆಯೇ ಬಡಿತ ತಿಂದಿದ್ದಾನೆ.