Featured
ಶಿವಮೊಗ್ಗದ ಈ ಹಳ್ಳಿ ಮಾಲ್ಗುಡಿ ರೈಲು ನಿಲ್ದಾಣವಾಗಲಿದೆ: ಶಂಕರ್ ನೆನಪು ಹಸಿರಾಗಿಸುವ ಪ್ರಯತ್ನ ಸಾಗಿದೆ
ಶಿವಮೊಗ್ಗ: ಮುಂಜಾನೆಯ ಮಂಜು ಕವಿದ ಕಾನೂರು, ಮಧ್ಯದಲ್ಲೊಂದು ಮೀಟರ್‌ಗೇಜ್ ಪುಟ್ಟ ರೈಲು, ಹೊಲಗದ್ದೆ, ಶಾಲೆ, ಹಳ್ಳಿಸೊಗಡಿನ ಮುಗ್ಧ ಜನರು, ಅಕ್ಕಪಕ್ಕದಲ್ಲಿ ಹರಿಯುವ ಹೊಳೆ-ತೊರೆ. ಇಷ್ಟರಲ್ಲೇ ಮಾಲ್ಗುಡಿ ಡೇಸ್ ಧಾರಾವಾಹಿಯ ಶೇ.೩೦ರಷ್ಟು ಭಾಗ ಚಿತ್ರೀಕರಣ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದ ಮೇರು ನಟ ದಿ.ಶಂಕರ್‌ನಾಗ, ಪ್ರತೀ ಕನ್ನಡಿಗನ ಹೃದಯದಲ್ಲೂ ಚಿರಸ್ಥಾಯಿ. ಈಗ ಈ ಹಳ್ಳಿ ನಿಧಾನವಾಗಿ ಮಾಲ್ಗುಡಿಯಾಗುವತ್ತ ದಾಪುಗಾಲು ಹಾಕುತ್ತಿದೆ.
ಅರಸಾಳು ಎಂಬ ಸುಂದರ ಹಳ್ಳಿಯ ಮಧ್ಯೆ ಒಂದು ಪುಟ್ಟ ರೈಲು ನಿಲ್ದಾಣ ಇದೆ, ಈಗ ಅದು ಮಾಲ್ಗುಡಿ ಮ್ಯೂಸಿಯಂ ಆಗಿ ಪರಿವರ್ತನೆಯಾಗುತ್ತಿದೆ. ಅಂದು ಮಾಲ್ಗುಡಿ ಡೇಸ್‌ಗೆ ಕಲಾನಿರ್ದೇಶಕನಾಗಿದ್ದ ಜಾನ್ ದೇವರಾಜ ಎಂಬುವರು ಮಾಲ್ಗುಡಿ ಮ್ಯೂಸಿಯಂ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಇನ್ನೇನು ಒಂದು ತಿಂಗಳಲ್ಲಿ ಪೂರ್ಣಪ್ರಮಾಣದಲ್ಲಿ ಈ ರೈಲು ನಿಲ್ದಾಣವನ್ನ ಮಾಲ್ಗುಡಿ ನಿಲ್ದಾಣ ಅಂದು ಕರೆಯಬಹುದು.
ಭಾರತದ ಸುಪ್ರಸಿದ್ಧ ಲೇಖಕ ಆರ್ ಕೆ ನಾರಾಯಣ್ ಬರೆದ ʻಮಾಲ್ಗುಡಿ ಡೇಸ್ ʼ ಪುಸ್ತಕವನ್ನ ದೃಶ್ಯವಾಗಿ ಕಟ್ಟಿಕೊಟ್ಟ ಕೀರ್ತಿ ಶಂಕರ್‌ನಾಗ್‌ರದ್ದು, ದೂರದರ್ಶನಲ್ಲಿ ೧೯೮೦-೯೦ರ ದಶಕದಲ್ಲಿ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ಎಲ್ಲರ ಮನೆಮಾತಾಗಿತ್ತು. ಮಾಲ್ಗುಡಿ ಎಂಬ ಊರು ಎಲ್ಲಿಯೂ ಇಲ್ಲ, ಇದೊಂದು ದಕ್ಷಿಣ ಭಾರತದ ಒಂದು ಹಳ್ಳಿಯ ಕಲ್ಪನೆ, ಆದರೆ ಶಂಕರ್‌ನಾಗ್ ಅರಸಾಳು ಹಾಗೂ ಆಗುಂಬೆ ಭಾಗದಲ್ಲಿ ಧಾರಾವಾಹಿ ಚಿತ್ರೀಕರಣ ಮಾಡಿದ್ದರು, ಈ ಧಾರಾವಾಹಿ ನೋಡಿ ಮೆಚ್ಚಿಕೊಂಡಿದ್ದ ಆರ್‌ಕೆ ನಾರಾಯಣ್, ಶಂಕರ್‌ನಾಗ್ ಮಾಲ್ಗುಡಿ ಹುಡುಕಿಕೊಟ್ಟರು ಎಂದು ಮನಸಾರೆ ಮೆಚ್ಚಿಕೊಂಡಿದ್ದರು.
ಅಂದು ಅರಸಾಳು ಹಾಗೂ ಸುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದಕ್ಕಾಗಿ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಇಲ್ಲಿಗೆ ಮಾಲ್ಗುಡಿ ಎಂದು ಮರು ನಾಮಕರಣಕ್ಕೆ ರೈಲ್ವೆ ಇಲಾಖೆಗೆ ಮನವಿ ಮಾಡಿರುವುದಾಗಿ ಹೇಳಿದ್ದರು. ಅದರ ಮೊದಲ ಹಂತವಾಗಿ ಮಾಲ್ಗುಡಿ ಮ್ಯೂಸಿಯಂ ಸಿದ್ಧವಾಗುತ್ತಿದೆ.