ರಾಜಕೀಯ
ಉನ್ನತ ಶಿಕ್ಷಣ ಪಡೆಯುವ ಮಕ್ಕಳ ಕನಸು ಸಾಕಾರಕ್ಕೆ ಸರ್ಕಾರದಿಂದಲೇ ವಿಶೇಷ ಕಲಿಕಾ ತರಬೇತಿ : ಸಚಿವ ಎಸ್ ಮಧು ಬಂಗಾರಪ್ಪ
![](https://risingkannada.com/wp-content/uploads/2024/02/madhu-bangarappa.jpg)
ಶಿವಮೊಗ್ಗ : ಮಕ್ಕಳ ಭವಿಷ್ಯದ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಶೈಕ್ಷಣಿಕ ಸಾಲಿನಿಂದಲೇ ಅನ್ವಯಗೊಳ್ಳುವಂತೆ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ಮತ್ತು ಉನ್ನತ ಶಿಕ್ಷಣ ಹಾಗೂ ಪ್ರವೇಶ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ವಿಶೇಷ ಕಲಿಕಾ ತರಗತಿಗಳನ್ನು ಸರ್ಕಾರದ ವತಿಯಿಂದಲೇ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ತೀರ್ಥಹಳ್ಳಿಯ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ತೀರ್ಥಹಳ್ಳಿ, ಪಟ್ಟಣ ಪಂಚಾಯಿತಿ ತೀರ್ಥಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ (ಕ್ರಾಶ್ ಕೋರ್ಸ್) ವಿಶೇಷ ತರಬೇತಿ ತರಗತಿಗಳಿಂದಾಗಿ ಜನಸಾಮಾನ್ಯ ಕುಟುಂಬದ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಅನುಕೂ¯ವಾಗಲಿದೆ ಅಲ್ಲದೆ ಅವರ ಕುಟುಂಬದ ಮುಖ್ಯಸ್ಥರಿಗೆ ಆರ್ಥಿಕವಾಗಿ ಸಹಕಾರಿಯಾಗಲಿದೆ ಎಂದರು.
ಸರ್ಕಾರದ ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆದವರ ಫಲಾನುಭವಿಗಳ ಸಮಾವೇಶ ಮಾತ್ರವಲ್ಲ, ಇದು ಸೌಲಭ್ಯ ವಂಚಿತರಿಗೆ ಸೌಲಭ್ಯ ಒದಗಿಸುವಲ್ಲಿಯೂ ಈ ವೇದಿಕೆ ನಿರ್ಮಾಣಗೊಂಡಿದ್ದು, ಸೌಲಭ್ಯ ವಂಚಿತ ಫಲಾನುಭವಿಗಳು ಸಂಬಂಧಿಸಿದ ಇಲಾಖಾ ಅಧಿಕಾರಿಗಳನ್ನು ಇಲ್ಲಿಯೇ ಸಂಪರ್ಕಿಸಿ, ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ. ಸಮಸ್ಯೆಗಳು ಎದುರಾದಲ್ಲಿ ಸ್ಥಳದಲ್ಲಿಯೇ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಹಕಾರಿಯಾಗಲಿದೆ. ಈಗಾಗಲೇ ಸೌಲಭ್ಯ ಪಡೆದ ಫಲಾನುಭವಿಗಳು ಪಕ್ಷಾತೀತವಾಗಿ ಅರ್ಹರನ್ನು ಗುರುತಿಸಿ ಸೌಲಭ್ಯ ದೊರೆಕಿಸಿಕೊಡಲು ಮುಂದಾಗಬೇಕೆಂದು ಅವರು ಮನವಿ ಮಾಡಿದರು.
ಸರ್ಕಾರವು ಚುನಾವಣಾ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ಐದೂ ಗ್ಯಾರಂಟಿಗಳನ್ನು ಜಾರಿಗೊಳಿಸಿ, ನುಡಿದಂತೆ ನಡೆದು, ಮುಂದೆ ಸಾಗುತ್ತಿದೆ. ಮುಂದೆಯೂ ಈ ಯೋಜನೆಗಳು ಜಾರಿಯಲ್ಲಿರಲಿವೆ ಎಂದ ಅವರು, ಪ್ರಸಕ್ತ ಸರ್ಕಾರವು ಪ್ರತಿ ಮನೆಯ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದು, ಜನರ ನೋವು-ನಲಿವುಗಳಿಗೆ ದ್ವನಿಯಾಗಲಿದೆ. ಅಲ್ಲದೇ ನೆರವಿಗೆ ಧಾವಿಸಲಿದೆ ಎಂದರು.
![](https://risingkannada.com/wp-content/uploads/2024/02/madhu-bangarappa1-1024x1024.jpg)
ಮಾಜಿ ಮುಖ್ಯಮಂತ್ರಿಗಳಾಗಿದ್ದ ಎಸ್.ಬಂಗಾರಪ್ಪ ಅವರ ಆಡಳಿತಾವಧಿಯಲ್ಲಿ ಜಾರಿಗೊಳಿಸಿದ್ದ ರೈತರ ಹೊಲಗಳಿಗೆ ಉಚಿತ ವಿದ್ಯುತ್ ಒದಗಿಸುವ ಯೋಜನೆ ದಶಕಗಳ ನಂತರವೂ ಜಾರಿಯಲ್ಲಿರುವುದು ಹರ್ಷದ ಸಂಗತಿಯಾಗಿದೆ. ಅವರ ಮಾರ್ಗದರ್ಶನದಲ್ಲಿಯೇ ನಾವೂ ಕೂಡ ಆಡಳಿತ ನಡೆಸಲು ಮುಂದಾಗಿದ್ದೇವೆ. ವಿಶೇಷವಾಗಿ ಅಂದಿನ ಪ್ರಣಾಳಿಕೆ ಸಮಿತಿಯ ಸದಸ್ಯನಾಗಿದ್ದೆ. ಪ್ರಣಾಳಿಕೆ ಇಂದು ಅನುಷ್ಠಾನಗೊಂಡಿದೆ ಎಂಬ ಹೆಮ್ಮೆ ನನಗಿದೆ ಎಂದರು.
ರಾಜ್ಯದ ಪ್ರತಿ ಮನೆಮನೆಗಳಿಗೆ ಉಚಿತ ಬೆಳಕು ನೀಡಿದ ಕೀರ್ತಿ ನಮ್ಮದು. ಯುವನಿಧಿ ಯೋಜನೆಯಡಿ ಯುವಕರು ತಮ್ಮ ಭವಿಷ್ಯದ ಬದುಕನ್ನು ರೂಪಿಸಿಕೊಳ್ಳುವಲ್ಲಿ ಸರ್ಕಾರ ನೀಡುವ ಸಹಾಯಧನ ಉಪಯುಕ್ತವಾಗಿರುವುದು ನಿರುದ್ಯೋಗಿಗಳಾಗಿ ವಿದ್ಯಾವಂತರ ಎಲ್ಲರ ಮುಖದಲ್ಲಿ ಮಂದಹಾಸ ಮೂಡಿಸಿರುವುದನ್ನು ಕಾಣಬಹುದಾಗಿದೆ ಎಂದರು.
ಈ ಎಲ್ಲಾ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಹೃದಯ ತುಂಬಿ ಬರುತ್ತದೆ. ಹೆಮ್ಮೆ ಎನಿಸುತ್ತದೆ. ವಹಿಸಿಕೊಂಡ ಖಾತೆ ಸವಾಲಿನದ್ದಾಗಿದ್ದರೂ ಅದನ್ನು ಜಾಗ್ರತೆಯಾಗಿ ನಿರ್ವಹಿಸುವ ಭರವಸೆಯಿಂದ ಹಿರಿಯರು ವಹಿಸಿದ ಅಧಿಕಾರವನ್ನು ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ ಎಂದರು.
ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಮಕ್ಕಳಿಗೆ ಸಮವಸ್ತ್ರ, ಶೂ, ಪಠ್ಯಪುಸ್ತಕ, ಮೊಟ್ಟೆ, ಬಾಳೆಹಣ್ಣು, ಚುಕ್ಕಿ, ಹಾಲು ಜೊತೆಗೆ ಪೌಷ್ಠಿಕ ಆಹಾರ ರಾಗಿ ಮಾಲ್ಟ್‍ನ್ನು ನೀಡಲು ಕ್ರಮವಹಿಸಲಾಗುತ್ತಿದೆ ಎಂದ ಅವರು, ಎಸ್.ಎಸ್.ಎಲ್.ಸಿ ಮತ್ತು ಪಿ.ಯು. ಅನುತ್ತೀರ್ಣ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗದೆ ಶಿಕ್ಷಣ ಪಡೆದು ಮುಂದುವರೆಯಲು ಅನುಕೂಲವಾಗುವಂತೆ ಮೂರು ಬಾರಿ ಪೂರಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಪ್ರಸಕ್ತ ಸಾಲಿನಲ್ಲಿ ಶಾಲೆಯಿಂದ ಹೊರಗುಳಿಯುತ್ತಿದ್ದ ಸುಮಾರು 40 ಸಾವಿರ ಮಕ್ಕಳು ಶಿಕ್ಷಣದ ಮುಖ್ಯವಾಹಿನಿಯಲ್ಲಿ ಮುಂದುವರೆಯುತ್ತಿದ್ದಾರೆ ಎಂದರು.
ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ಉಚಿತ ವಿದ್ಯುತ್ ಮತ್ತು ನೀರನ್ನು ಒದಗಿಸಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಈ ಅವಧಿಯಲ್ಲಿ ಅಲ್ಲಿನ ಶಿಕ್ಷಕರು ಮಕ್ಕಳಿಗೆ ವಿಶೇಷ ಕಲಿಕಾ ತರಗತಿಗಳನ್ನು ಮಾಡುವಂತೆ ಮನವಿ ಮಾಡಿದ ಅವರು, ಸರ್ಕಾರಿ ಶಾಲೆಗಳಲ್ಲಿ ನೇಮಕವಾಗಿರುವ ಶಿಕ್ಷಕರೆಲ್ಲರೂ ಪ್ರತಿಭಾವಂತರೇ ಇರುವುದು ಮಕ್ಕಳ ಕಲಿಕೆಗೆ ಸಹಕಾರಿಯಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ದೇಶದಲ್ಲಿಯೇ ಮೊದಲ ಬಾರಿಗೆ ಜನಸಾಮಾನ್ಯರಿಗೆ ಅನುಕೂಲವಾಗುವಂತೆ, ಅವರ ಆಶೋತ್ತರಗಳಿಗೆ ಪೂರಕವಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿರುವುದು ವಿಶೇಷವಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಗ್ಯಾರಂಟಿ ಯೋಜನೆಗಳ ಮಾಹಿತಿ ಒದಗಿಸುವುದರ ಜೊತೆಗೆ, ಸೌಲಭ್ಯ ವಂಚಿತರನ್ನು ಗುರುತಿಸಿ, ಸೌಲಭ್ಯ ಒದಗಿಸುವುದಾಗಿದೆ. ಈಗಾಗಲೇ ಜಿಲ್ಲೆಯ ಲಕ್ಷಾಂತರ ಜನ ವಿವಿಧ ಗ್ಯಾರಂಟಿ ಯೋಜನೆಗಳ ಲಾಭ ಪಡೆದಿರುವುದು ಪ್ರತ್ಯಕ್ಷವಾಗಿ ಕಾಣಬಹುದಾಗಿದೆ ಎಂದರು.
ಇದೇ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ಅರ್ಹ ಫಲಾನುಭವಿಗಳಿಗೆ ಲ್ಯಾಪ್‍ಟಾಪ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಕಾರ್ಮಿಕ ಅಧಿಕಾರಿ ಸುಮಾ, ಉದ್ಯೋಗಾಧಿಕಾರಿ ಖಲಂದರ್ ಖಾನ್, ತಹಶೀಲ್ದಾರ್, ತಾಲೂಕು ಪಂಚಾಯತ್ ಇಓ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?